ಕಸ್ತೂರಿ ದನ

 ದನವನ್ನು ಹೋಲುವ ಒಂದು ಅಪೂರ್ವಜಾತಿಯ ಮೆಲುಕು ಹಾಕುವ ಪ್ರಾಣಿ (ಮಸ್ಕ್ ಆಕ್ಸ್). ದನಗಳಿಗೂ ಕುರಿ ಆಡುಗಳಿಗೂ ಹತ್ತಿರದ ಸಂಬಂಧಿಯಾದ ಇದು ಆರ್ಟಿಯೊಡಾಕ್ಟೈಲ ಗಣ, ಬೋವಿಡೀ ಕುಟುಂಬ ಮತ್ತು ಕ್ಯಾಪ್ರಿನೀ ಉಪಕುಟುಂಬಕ್ಕೆ ಸೇರಿದೆ. ಇದರ ವೈಜ್ಞಾನಿಕ ನಾಮ ಓವಿಬಾಸ್ ಮಾಸ್ಕೇಟಸ್. ಇದರ ದೇಹದಿಂದ ಕಸ್ತೂರಿಯಂಥ ವಾಸನೆ ಹೊರಸೂಸುವುದರಿಂದ ಇದಕ್ಕೆ ಈ ಹೆಸರು ಬಂದಿದೆ.

 ಸುಮಾರು ಒಂದು ಮಿಲಿಯ ವರ್ಷಗಳ ಹಿಂದೆ ಸೈಬೀರಿಯ, ಜರ್ಮನಿ, ಫ್ರಾನ್ಸ್ ಹಾಗೂ ಇಂಗ್ಲೆಂಡುಗಳಲ್ಲಿ ಹೇರಳವಾಗಿತ್ತೆಂದು ಹೇಳಿಕೆ. ಈಗ ಕೆನಡಾದ ಟಂಡ್ರ ಪ್ರದೇಶ, ಉತ್ತರ ಶೀತವಲಯದ ಕೆಲವು ದ್ವೀಪಗಳು, ಗ್ರೀನ್‍ಲೆಂಡಿನ ಉತ್ತರ ತೀರಪ್ರದೇಶ ಮುಂತಾದ ಸ್ಥಳಗಳಿಗೆ ಮಾತ್ರ ಸೀಮಿತಗೊಂಡಿದೆ.

 ಕಸ್ತೂರಿದನ ತನ್ನ ಲಕ್ಷಣಗಳಲ್ಲಿ ದನಗಳನ್ನು ಕುರಿ ಆಡುಗಳನ್ನು ಹೋಲುತ್ತದೆ.  ನೋಡಲು ಕೊಂಚಮಟ್ಟಿಗೆ ಅಮೆರಿಕದ ಕಾಡುಕೋಣದಂತಿದೆ. ಗಂಡು ಕಸ್ತೂರಿದನ ಸುಮಾರು (5') ಎತ್ತರವಿದ್ದು ಸು. 250 ರಿಂದ 350 ಕಿ.ಗ್ರಾಂ ತೂಗುತ್ತದೆ.  ಹೆಣ್ಣು ಸ್ವಲ್ಪ ಚಿಕ್ಕ ಗಾತ್ರದ್ದು. ಮೈಮೇಲೆ ಬಲು ಉದ್ದವಾದ, ಒರಟೊರಟಾಗಿ ಜಡೆಗಟ್ಟಿದ ಕಂದು ಬಣ್ಣದ ಕೂದಲಿವೆ. ಇವು ಆಗಾಗ ಗಚ್ಚುಗಚ್ಚಾಗಿ ಉದುರಿ ಹೋಗುವುದುಂಟು.  ಈ ಉದ್ದವಾದ ಕೂದಲುಗಳ ಹೊರಹೊದಿಕೆಯ ಒಳಗೆ ದಟ್ಟವಾದ ಉಣ್ಣೆಯಿದೆ. ಇದೂ ಕೂಡ ಪ್ರತಿ ಬೇಸಿಗೆಯಲ್ಲಿ ಉದುರಿಹೋಗುತ್ತದೆ.  ಇಂಥ ಎರಡು ಪದರಗಳ ಹೊದಿಕೆಯಿಂದಾಗಿ ಈ ಪ್ರಾಣಿ ಎಂಥ ಶೀತವನ್ನಾದರೂ ತಡೆದುಕೊಳ್ಳಬಲ್ಲದು. ಕಸ್ತೂರಿದನಕ್ಕೆ ಬಲು ಚಿಕ್ಕವಾದ ಮತ್ತು ದೃಢವಾದ ಕಾಲುಗಳಿವೆ. ಕುತ್ತಿಗೆ ಬಹಳ ಚಿಕ್ಕದು. ಕಿವಿಗಳೂ ಸಣ್ಣವು. ಕೊಂಬುಗಳು ಮಾತ್ರ ಅಗಲವಾಗಿಯೂ ಮೊನಚಾಗಿಯೂ ಇವೆ. ತಲೆಯಲ್ಲಿ ಪ್ರಮುಖವಾಗಿ ಕಾಣುವ ಇವು ತಲೆಯ ಎರಡು ಪಕ್ಕಗಳಲ್ಲಿ ಕೆಳಮುಖನಾಗಿ ಬಾಗಿ ಮತ್ತೆ ತುದಿಯಲ್ಲಿ ಹಿಮ್ಮುಖನಾಗಿ ಬಾಗಿವೆ.

 ಕಸ್ತೂರಿದನಗಳು ಹಿಂಡುಗಳಲ್ಲಿ ವಾಸಿಸುತ್ತವೆ. ಒಂದು ಗುಂಪಿನಲ್ಲಿ ಒಂದು ಗಂಡು, ಹಲವಾರು ಹೆಣ್ಣುದನಗಳು ಹಾಗೂ ಕರುಗಳು ಇರುತ್ತವೆ. ಕೆಲವು ಸಲ ಅನೇಕ ಗಂಡುಗಳು ತಮ್ಮ ತಮ್ಮ ಪರಿವಾರ ಸಮೇತ ಒಂದೇ ಗುಂಪಿನಲ್ಲಿರಬಹುದು. ಆಹಾರಕ್ಕಾಗಿ ಹಿಂಡುಹಿಂಡಾಗಿಯೇ ಸಂಚರಿಸುತ್ತವೆ. ಹುಲ್ಲು, ಕಲ್ಲುಹೊ, ಪಾಚಿ, ವಿಲೋ ಮುಂತಾದ ಕುರುಚುಲು ಗಿಡಗಳು ಇವುಗಳ ಆಹಾರ.

 ಕಸ್ತೂರಿದನ ಮರಿಹಾಕುವ ಕಾಲ ಮೇ ಅಥವಾ ಜೂನ್ ತಿಂಗಳು. ಹೆಣ್ಣುದನ ಸುಮಾರು 9 ತಿಂಗಳ ಗರ್ಭಧಾರಣೆಯ ಅವಧಿಯ ಅನಂತರ ಒಂದು ಸಲಕ್ಕೆ ಒಂದು ಮರಿಯನ್ನು ಈಯುತ್ತದೆ.

 ಮನುಷ್ಯ ಮತ್ತು ತೋಳಗಳು ಕಸ್ತೂರಿದನದ ಪ್ರಮುಖ ಶತ್ರುಗಳು. ಶತ್ರುವಿನಿಂದ ಆವೃತವಾದಾಗ ಮಂಡಲಾಕಾರದ ಗುಂಪುಗಳಲ್ಲಿ ನಿಂತು ಶತ್ರುಗಳನ್ನೆದುರಿಸುತ್ತವೆ.  ಗುಂಪಿನ ಮಧ್ಯೆ ಕರುಗಳನ್ನು ಸೇರಿಸಿಕೊಂಡು ಸುತ್ತಲೂ ಗಂಡುಗಳು ತಮ್ಮ ಹರಿತವಾದ ಕೊಂಬುಗಳನ್ನು ತೋರಿಸುತ್ತ ಹಗೆಯೊಂದಿಗೆ ಸೆಣೆಸಲು ಅನುವಾಗುತ್ತವೆ.  ತೋಳಗಳನ್ನು ಯಶಸ್ವಿಯಾಗಿ ಎದುರಿಸಬಲ್ಲವಾದರೂ ಶಸ್ತ್ರಸಜ್ಜಿತ ಮಾನವಶಕ್ತಿಗೆ ಸುಲಭವಾಗಿ ಮಣಿಯುತ್ತವೆ.  ಹೀಗಾಗಿ ಇಂದು ಇವುಗಳ ಸಂಖ್ಯೆ ಬಹಳ ಇಳಿದು ಹೋಗಿದೆ.  ಮಾಂಸ ಮತ್ತು ಬೆಲೆಬಾಳುವ ಉಣ್ಣೆಗಾಗಿ ಇವುಗಳ ಬೇಟೆ ನಡೆದೇ ಇದೆ.  ಇವು ಚೆನ್ನಾಗಿ ಹಾಲುಕೊಡಬಲ್ಲವಾದುದರಿಂದ ಕೆಲವೆಡೆ ಇವನ್ನು ಸಾಕುವ ಪ್ರಯತ್ನಗಳೂ ನಡೆದಿವೆ.        

(ಎ.)

 
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ